ಸಿಂಧೂನದಿ
	ಭಾರತ ಮತ್ತು ಪಾಕಿಸ್ತಾನಗಳೆರಡರಲ್ಲೂ ಪ್ರವಹಿಸುವ ಒಂದು ಹಿಮನದಿ. ಇದರ ಹೆಚ್ಚುಭಾಗ ಈಗ ಪಾಕಿಸ್ತಾನಕ್ಕೆ ಸೇರಿಹೋಗಿದೆ. ಇದನ್ನು ರಾಜನದಿ, ಇಂಡಸ್ ಎಂತಲೂ ಕರೆಯುತ್ತಾರೆ. ಹಿಮಾಲಯ ಪರ್ವತದಲ್ಲಿ ಸು. 5,180 ಮೀ ಎತ್ತರದಲ್ಲಿ ಹುಟ್ಟಿ ವಾಯವ್ಯದಿಕ್ಕಿನಲ್ಲಿ ಸು.2,897 ಕಿಮೀ ದೂರ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಬ್ರಹ್ಮಪುತ್ರಾ, ಸಟ್ಲೆಜ್ ಮತ್ತು ಗೋಗ್ರಾ ನದಿಗಳೂ ಇದರ ಸುತ್ತಲಿನ ಸಮೀಪ ಪ್ರದೇಶಗಳಲ್ಲೆ ಹುಟ್ಟುವುವು. ಈ ನದಿ ಕಣಿವೆಯಲ್ಲೆ ಸಿಂಧೂ ನಾಗರಿಕತೆ ಹುಟ್ಟಿ ಪ್ರಪಂಚದ ಅತ್ಯಂತ ಹಳೆಯ ನಾಗರಿಕತೆ ಎನಿಸಿತು. ಸಿಂಧೂ ನದಿ ಕಾರಾಕೊರಮ್ ಪರ್ವತ ಶ್ರೇಣಿಯ ದಕ್ಷಿಣಕ್ಕಿರುವ ಕಾಶ್ಮೀರದಲ್ಲಿ ಹಾದು ದಕ್ಷಿಣಾಭಿಮುಖವಾಗಿ ಪರ್ವತ ಸ್ತೋಮದಲ್ಲಿ ನುಸುಳಿಕೊಂಡು ಪೇಷಾವರ ಮತ್ತು ರಾವಲ್‍ಪಿಂಡಿ ಮೂಲಕ ಹರಿಯುತ್ತದೆ. ಈ ನದಿಗೆ ತರ್‍ಬೆಲಾದಲ್ಲಿ ಕಟ್ಟಲಾಗಿರುವ ಅಣೆಕಟ್ಟು ನೂರಾರು ಹೆಕ್ಟೇರುಗಳಿಗೆ ನೀರೊದಗಿಸಿ ಕೃಷಿಗೆ ಅನುಕೂಲ ಮಾಡಿಕೊಟ್ಟಿದೆ. ಮುಂದೆ ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಮೈದಾನ ಪ್ರದೇಶದಲ್ಲಿ ನಿಧಾನವಾಗಿ ಹರಿದು ಹೈದರಾಬಾದನ್ನು ತಲುಪುತ್ತದೆ. ಹಾಗೆಯೇ ಕರಾಚಿಯಲ್ಲಿ ವಿಶಾಲವಾದ ನದೀ ಮುಖಜ ಭೂಮಿಯನ್ನು ಸೃಷ್ಟಿಸಿದೆ. ಈ ಪ್ರದೇಶ ಪ್ರಪಂಚದಲ್ಲಿಯೇ ಅತ್ಯಂತ ಮುಖ್ಯವಾದ ಜೈವಿಕ ಪರಿಸರವಾಗಿ ಡಾಲ್ಫಿನ್‍ನ ಆಧುನಿಕ ಜೈವಿಕ ಸಂಶೋಧನೆಗೆ ಎಡೆಮಾಡಿಕೊಟ್ಟಿದೆ. ಬೇಸಗೆಯಲ್ಲಿ ಹಿಮ ಕರಗುವುದರಿಂದ ಈ ನದಿಯಲ್ಲಿ ವರ್ಷವಿಡೀ ನೀರಿರುತ್ತದೆ. 

	ಈ ನದಿಗೆ ಗಿಲ್ಗಿಟ್, ಗುಮಾಲ್, ಕಾಬೂಲ್ ಮತ್ತು ಸಟ್ಲೆಜ್ ಮುಂತಾದ ಅನೇಕ ಉಪನದಿಗಳು ಸೇರುತ್ತವೆ. ಗಿಲ್ಗಿಟ್ ನದಿಗೆ ಗೀಜಾರ್ ಹಾಗೂ ಹುನ್‍ಸಾ ಉಪನದಿಗಳಾದರೆ eóÉೂೀಆಬ್ ಮತ್ತು ಕುನಾರ್ ನದಿಗಳು ಗುಮಾಲ್ ಹಾಗೂ ಕಾಬೂಲ್ ನದಿಗಳಿಗೆ ಉಪ ನದಿಗಳಾಗಿವೆ. ಸಟ್ಲೆಜ್ ನದಿಗೆ ಬಿಯಾಸ್ ಮತ್ತು ಚೀನಾಬ್ ಉಪನದಿ ಗಳಾದರೆ, ಝೇಲಮ್ ಮತ್ತು ರಾವಿ ಚೀನಾಬ್ ನದಿಗೆ ಉಪನದಿಗಳಾಗಿವೆ. 

	ಈ ನದಿಗಳು ಸಮತಟ್ಟಾದ ಪ್ರದೇಶಗಳಲ್ಲಿ ಹರಿಯುವಾಗ ತಿರುವುಗಳನ್ನು ಸೃಷ್ಟಿಸುತ್ತವೆ. ನದಿ ದಂಡೆಯ ಕೊರೆತದಿಂದುಂಟಾದ ಶೃಂಗ ಸರೋವರಗಳು ಇಲ್ಲಿ ಕಂಡುಬರುತ್ತವೆ. ಅಲ್ಲದೆ ಅಪಾರ ಪ್ರಮಾಣದ ಮೆಕ್ಕಲು ಮಣ್ಣನ್ನು ನದಿಯ ಮುಖಜಭೂಮಿ ಪ್ರದೇಶಗಳಿಗೆ ಕೊಂಡೊಯ್ಯುತ್ತವೆ. ಅಲೆಗಳ ರೂಪದಲ್ಲಿ ಸಮುದ್ರದಿಂದ ಹಿನ್ನುಗ್ಗುವ ಉಪ್ಪುನೀರು ಅನೇಕ ಅಳಿವೆಗಳನ್ನು ನಿರ್ಮಿಸಿದೆ. ಕಡಿದಾದ ಕಮರಿಗಳಲ್ಲಿ ಈ ನದಿಗಳು ದುಮುಕುವುದರಿಂದ ಅನೇಕ ವಿದ್ಯುತ್ ಯೋಜನೆಗಳಿಗೆ ಸಹಾಯಕವಾಗಿವೆ.

	ಸಿಂಧೂನದಿ ಭಾರತದಲ್ಲಿ ಸು.2,720 ಕಿಮೀ ದೂರವನ್ನು ಕ್ರಮಿಸುತ್ತದೆ. ಮೈದಾನ ಪ್ರದೇಶದಲ್ಲಿ ಹರಿಯುವಾಗ ಅಲ್ಲಿಯ ಸಾಂದ್ರ ಕೃಷಿಗೆ ನೆರವಾಗಿದೆ. ನೀರಾವರಿ ಪದ್ಧತಿಯ ಸುಧಾರಣೆಯಿಂದಾಗಿ ಸಾವಿರಾರು ಜನರ ಜೀವನಾಡಿಯಾಗಿದೆ. ನದೀ ದಡದ ಜನರಿಗೆ ಮೀನುಗಾರಿಕೆ ಒಂದು ಮುಖ್ಯ ಕಸುಬಾಗಿದೆ. 1972ರಲ್ಲಿ ಪಾಕಿಸ್ತಾನ ಸರ್ಕಾರ ಸಿಂಧ್ ಪ್ರಾಂತದಲ್ಲಿ ಸ್ಥಾಪಿಸಿದ ಡಾಲ್ಫಿನ್ ಗೇಮ್ ರಿಸರ್ವ್ ಡಾಲ್ಫಿನ್ ಮೀನಿನ ಸಂರಕ್ಷಣೆ, ಅಭಿವೃದ್ಧಿ,  ಮೀನುಗಾರಿಕೆ, ಅಂತರ್ಜಲ ಅಭಿವೃದ್ಧಿ ಹಾಗೂ ಜಲ ಮಾಲಿನ್ಯ ನಿಯಂತ್ರಣಕ್ಕೆ ಕಾರಣವಾಯಿತು.

	ಸಿಂಧೂನದಿ ಸು. 2,20,000 ಹೆಕ್ಟೇರ್ ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಅಲ್ಲದೆ 1,32,000 ಹೆಕ್ಟೇರ್ ಭೂ ಪ್ರದೇಶಕ್ಕೆ ಬ¥sóÀರ್ eóÉೂೀನ್ ಕಲ್ಪಿಸಿದೆ. ಈ ನದಿ ತನ್ನ ಉಗಮ ಸ್ಥಳದಿಂದ 1,304 ಕಿಮೀ ದೂರ ಹರಿದು ಪಂಜಾಬ್ ಪ್ರಾಂತವನ್ನು ಪ್ರವೇಶಿಸುತ್ತದೆ. ಅನಂತರ 77 ಕಿಮೀ ದೂರ ಮುಂದೆ ಸಾಗಿ ಆಪ್ಘಾನಿಸ್ತಾನದ ಕಾಬೂಲ್ ನದಿಯನ್ನು ಸಂಧಿಸುತ್ತದೆ. ಅನಂತರ ಪಾಕಿಸ್ತಾನದ ವಾಯವ್ಯ ದಿಕ್ಕಿನಲ್ಲಿ ಹರಿದು ಪಂಜಾಬ್ ಮತ್ತು ಸಿಂಧ್ ಪ್ರಾಂತವನ್ನು ಪ್ರವೇಶಿಸುತ್ತದೆ. ಮುಂದೆ ಮೂರು ಕವಲುಗಳಾಗಿ ಒಡೆದು ಅತ್ಯಂತ ಫಲವತ್ತಾದ ಮುಖಜ ಭೂಮಿಯನ್ನುಂಟುಮಾಡಿದೆ. ಹೀಗೆ ಈ ನದಿ ಸು.9,70,00 ಚ.ಕಿಮೀ ಪ್ರದೇಶಕ್ಕೆ ನೀರನ್ನು ಒದಗಿಸುತ್ತದೆ. 

	ಪ್ರಪಂಚದ ಎಲ್ಲ ನದಿಗಳಂತೆ ಸಿಂಧೂನದಿ ಮಾನವ ನಿರ್ಮಿತ ಮಾಲಿನ್ಯದಿಂದ ಹೊರತಾಗಿಲ್ಲ. ನಗರಗಳಿಂದ ನದಿಗೆ ಹರಿಯುವ ಕೊಳಚೆ ನೀರು, ಕೈಗಾರಿಕೆಯ ತ್ಯಾಜ್ಯ, ರಾಸಾಯನಿಕ ವಸ್ತುಗಳು ನದಿಯನ್ನು ಕಲುಷಿತಗೊಳಿಸಿವೆ. ಪ್ರವಾಹಗಳು ನೈಸರ್ಗಿಕ ಚಕ್ರದ ಸಹಜ ಸ್ಥಿತಿಯಾದರೆ, ಮಾನವನ ಚಟುವಟಿಕೆಗಳು ಅದರಲ್ಲೂ ಕೃಷಿ ಭೂಮಿಯ ಪರಿವರ್ತನೆಗೆ ನದೀ ದಡದ ಇಕ್ಕೆಲಗಳಲ್ಲಿರುವ ಬದಿ ಮತ್ತು ಅಲ್ಲಿಯ ಜೌಗು ಸಸ್ಯಗಳ ನಿರ್ಮೂಲನದಿಂದಾಗಿ ನದಿಯ ಇಂಗುವಿಕೆ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಕೆಲವೊಮ್ಮೆ ಬೇಸಗೆಯಲ್ಲಿ ಹೆಚ್ಚು ಹಿಮಕರಗಿ ಮತ್ತು ಅಧಿಕ ನೀರು ನುಗ್ಗಿ ಪ್ರವಾಹಗಳುಂಟಾಗುತ್ತವೆ.
		(ಕೆ.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ